ಮನಮೋಹನ ಘೋಷ್
1844-96. ನ್ಯಾಯವಾದಿ, ದೇಶಪ್ರೇಮಿ, ಮತ್ತು ಸಮಾಜಸುಧಾರಕ. ಬಂಗಾಲದ ಕೃಶ್ ನಗರದಲ್ಲಿ 1844ರಲ್ಲಿ ಜನನ. ತಂದೆ ರಾಮ ಲೋಚನ ಘೋಷ್ ನ್ಯಾಯಾಂಗ ಕಚೇರಿಯಲ್ಲಿದ್ದರು. ರಾಮ್‍ಮೋಹನ್‍ರಾಯ್ ಒಡನಾಡಿಯಾಗಿದ್ದ ಅವರು ತಮ್ಮ ಮಕ್ಕಳಾದ ಮನಮೋಹನ ಮತ್ತು ಲಾಲಮೋಹನರಲ್ಲಿ ಪ್ರಗತಿಪರ ಹಾಗೂ ದೇಶಪ್ರೇಮ ದೃಷ್ಟಿ ಬೆಳೆಯಲು ಕಾರಣರಾದರು. ಮನಮೋಹನರು 1859ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ 1861ರಲ್ಲಿ ಪ್ರೆಸಿಡೆನ್ಸಿ ಕಾಲೇಜನ್ನು ಪ್ರವೇಶಿಸಿ ಮರುವರ್ಷವೇ ಆಗಿನ ಐಸಿಎಸ್ ಪರೀಕ್ಷೆಗೆ ಕುಳಿತುಕೊಳ್ಳುವ ಉದ್ದೇಶದಿಂದ ಇಂಗ್ಲೆಂಡಿಗೆ ತೆರಳಿದರು. ಪರೀಕ್ಷೆಯಲ್ಲಿ ಘೋಷರು ಉತ್ತೀರ್ಣರಾಗಲಿಲ್ಲ. ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳಲು ಅವರ ವಯಸ್ಸು ಅಡ್ಡ ಬಂತು. ಆದ್ದರಿಂದ ನ್ಯಾಯವಾದಿ (ಬ್ಯಾರಿಸ್ಟರ್) ಪದವಿ ಗಳಿಸಿ 1866ರಲ್ಲಿ ಸ್ವದೇಶಕ್ಕೆ ಹಿಂತಿರುಗಿ ಕಲ್ಕತ್ತೆಯಲ್ಲಿ ನ್ಯಾಯವಾದಿಯ ವೃತ್ತಿಯನ್ನು ಕೈಗೊಂಡು ಶೀಘ್ರದಲ್ಲಿಯೇ ಪ್ರಸಿದ್ಧರಾದರು.

ಮನಮೋಹನರು ಪ್ರಾರಂಭದಿಂದಲೂ ಸಾರ್ವಜನಿಕ ವ್ಯವಹಾರಗಳಲ್ಲಿ ಆಸಕ್ತಿ ತಾಳಿದ್ದರು. 1860ರಲ್ಲಿ ಇಂಡಿಗೋ ತೋಟಗಳ ಐರೋಪ್ಯಮಾಲಿಕರಿಂದ ಭಾರತೀಯ ರೈತರಿಗಾಗುತ್ತಿದ್ದ ಕಿರುಕುಳ ಕಷ್ಟಗಳ ವಿರುದ್ದ ಪ್ರತಿಭಟಿಸಿ ಹಿಂದೂ ಪತ್ರಿಕೆಗೆ ಪತ್ರಗಳನ್ನು ಬರೆದಿದ್ದರು. ಮರುವರ್ಷ ಇಂಡಿಯನ್ ಮಿರರ್ ಎಂಬ ದ್ವಿಸಾಪ್ತಾಹಿಕ ಪತ್ರಿಕೆ ಪ್ರಾರಂಭಿಸಿ 1862 ಮಾರ್ಚ್ ತನಕ ಅದರ ಸಂಪಾದಕರಾಗಿದ್ದರು. ನ್ಯಾಯವಾದಿಯ ವೃತ್ತಿಯಲ್ಲಿದ್ದಾಗ ಬ್ರಿಟಿಷ್ ಇಂಡಿಯನ್ ಅಸೋಸಿಯೇಷನ್ನಿನ ಸದಸ್ಯರಾದರು. 1885ರಲ್ಲಿ ಎರಡನೆಯ ಸಲ ಇಂಗ್ಲೆಂಡಿಗೆ ಭೇಟಿಯಿತ್ತಾಗ ಭಾರತದ ವ್ಯವಹಾರಗಳಲ್ಲಿ ಬ್ರಿಟಿಷರಿಗೆ ಆಸಕ್ತಿ ಹುಟ್ಟಿಸುವ ಸಲುವಾಗಿ ಹೋಗಿದ್ದ ಭಾರತೀಯರ ನಿಯೋಗವನ್ನು ಕೂಡಿಕೊಂಡರು. 1887, 1890 ಮತ್ತು 1895ರಲ್ಲಿ ಇಂಗ್ಲೆಂಡಿಗೆ ಹೋದಾಗ ಭಾರತದ ರಾಜಕೀಯ ಪರಿಸ್ಥಿತಿ ಕುರಿತು ಭಾಷಣಗಳನ್ನು ಮಾಡಿದರು. ಧಾರ್ಮಿಕ ಆಚಾರವಿಚಾರ, ಸಮಾಜಸುಧಾರಣೆ, ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಮಹತ್ತ್ವ, ಪಾಶ್ಚಾತ್ಯಶಿಕ್ಷಣ, ಬ್ರಿಟಿಷರ ನ್ಯಾಯಾಂಗ ಪದ್ದತಿ ಹಾಗೂ ನ್ಯಾಯನಿಷ್ಟುರತೆ ಮೊದಲಾದ ವಿಷಯಗಳಲ್ಲಿ ಅವರ ವಿಚಾರಗಳು ಪ್ರಗತಿಪರವಾಗಿದ್ದುವು. ಸ್ವದೇಶಪ್ರೇಮದಿಂದ ಕೂಡಿದ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ಸೇರಿ ಆ ಸಂಸ್ಥೆಯ 1890ರ ಕಲ್ಕತ್ತ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಅಂತೆಯೇ 1886ರಲ್ಲಿ ಕೂಡಿದ ಬಂಗಾಲದ ಪ್ರಾಂತೀಯ ಸಮ್ಮೇಳನದ ಕೃಶ್ ನಗರದ ಅಧಿವೇಶನದ ಸ್ವಾಗತಸಮಿತಿಯ ಅಧ್ಯಕ್ಷರೂ ಆಗಿದ್ದರು. ಮಹಿಳೆಯರ ಶಿಕ್ಷಣದ ಪ್ರತಿಪಾದಕರಾಗಿದ್ದ ಅವರು ತಮ್ಮ ಪತ್ನಿ ಸ್ವರ್ಣಲತಾ ಅವರನ್ನು ಲಾರೆಟೊ ಕಾನ್ವೆಂಟಿಗೆ ಶಿಕ್ಷಣಕ್ಕಾಗಿ ಕಳುಹಿಸಿದರು. ಹಿಂದೂ ಮಹಿಳಾ ವಿದ್ಯಾಲಯ ಹಾಗೂ ವಂಗಮಹಿಳಾ ವಿದ್ಯಾಲಯಗಳ ಪೋಷಕರಾಗಿದ್ದರು. ಬ್ರಾಹ್ಮೋ ಸಮಾಜದ ಸದಸ್ಯರಾಗಿದ್ದ ಅವರ ಆಚಾರವಿಚಾರಗಳು ಪ್ರಗತಿಶೀಲ ಹಾಗೂ ಕ್ರಾಂತಿಕಾರಕವಾಗಿದ್ದುವು.

ಬಂಗಾಲದ ಮಹಾಕವಿ ಮೈಕಲ್ ಮಧುಸೂದನದತ್ತ ಹಾಗೂ ಮನಮೋಹನರ ನಡುವೆ ಗಾಢಮೈತ್ರಿಯಿತ್ತು. ಅವರಿಗೆ ಮೈಕೇಲರ ಕವಿತೆಗಳ ಬಗೆಗೆ ಗೌರವವಿತ್ತು. ಕವಿಯ ಅಂತ್ಯಕಾಲದಲ್ಲಿ ಮರಣಶಯ್ಯೆಯ ಬಳಿಯಲ್ಲಿದ್ದು ತಮ್ಮಲ್ಲಿ ಒಂದೇ ರೊಟ್ಟಿಯಿದ್ದರೂ ಅದನ್ನು ಅವರ ಮಕ್ಕಳೊಂದಿಗೆ ಹಂಚಿಕೊಳ್ಳುವುದಾಗಿ ವಚನವಿತ್ತು ಅವರನ್ನು ನಿಶಿಂತರನ್ನಾಗಿ ಮಾಡಿದರು. ಇದು ಅವರ ಉದಾರ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ. 1996 ಅಕ್ಟೋಬರಿನಲ್ಲಿ ಕೃಶ್ ನಗರದಲ್ಲಿ ಘೋಷರ ದೇಹಾಂತವಾಯಿತು.
 	(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ